Thursday, May 31, 2012

ವೈಫಲ್ಯ

ಮನುಜ.....
ನಿನ್ನ ವೈಫಲ್ಯಕ್ಕೆ ನೀನೆ ಕಾರಣ
ಅನ್ಯರಲ್ಲಿ ಹುಡುಕಿದರೆ ಫಲ ಸಿಗದು
ನಿನ್ನಲ್ಲಿದ್ದ ವಿಶ್ವಾಸ 
ನಿನ್ನ ಕಠಿಣ ಶ್ರಮ
ಅದೇ ನಿನ್ನ ವೈಫಲ್ಯಕ್ಕೆ ಮದ್ದು 
ನಿನ್ನನ್ನು ಯಶಸ್ವಿ ವ್ಯಕ್ತಿಯಾಗಿ ನಿರ್ಮಿಸುವುದು
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, May 30, 2012

ಸನ್ಯಾಸ

ಮನುಜ.....
ಸಂಸಾರದ ಭಾರ ಹೊರುವ
ಸಾಮರ್ಥ್ಯ ಇಲ್ಲದವನಿಗೆ ಸನ್ಯಾಸ ಏಕೆ?
ಮೋಹ ಮಾಯಾ ಬಿಡುವವನಿಗೆ
ಸನ್ಯಾಸದ ಮೋಹ ಏಕೆ?
ಕುಟುಂಬ ತ್ಯಜಿಸುವವನು ಸನ್ಯಾಸಿ ಅಲ್ಲ
ಅವನು ಕೇವಲ ಕರ್ತವ್ಯ ಕಳ್ಳ
ಸನ್ಯಾಸದ ಪ್ರತಾಪ ಅವನೇನು ಬಲ್ಲ
ಗಡ್ಡ ಮೀಸೆ ಬಿಟ್ಟು ಅಲೆಯುವರೆಲ್ಲ ಸನ್ಯಾಸಿಯರು ಅಲ್ಲ
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಎಲ್ಲೊ ಸಂಜೆ ಸೂರ್ಯ ಮುಳುಗುವಾಗ

ಎಲ್ಲೊ ಸಂಜೆ ಸೂರ್ಯ ಮುಳುಗುವಾಗ
ನನ್ನ ಹೃದಯ ತಳಮಳಗೊಂಡು
ವಿರಹ ಗೀತೆ ಹಾಡುತ್ತದೆ
ಮನಸ್ಸಿನ ಹಕ್ಕಿ ಗೂಡಿಗೆ ಸೇರಿ
ನೆನಪಿನ ಅನ್ನವ ಸವಿಯುತ್ತದೆ !

ಎಲ್ಲೊ ಸಂಜೆ ಸೂರ್ಯ ಮುಳುಗುವಾಗ
ಆನಂದದ ಸೂರ್ಯಕಾಂತಿ ಹೂ
ತನ್ನ ನಗು ರೂಪವನ್ನು ಮುಚ್ಚುತ್ತದೆ
ವಿಚಾರ ಸಮುದ್ರದ ಶಾಂತ ಅಲೆಗಳು
ಕಣ್ಣ ತೀರ ಬಂದು ಉಕ್ಕೇರುತ್ತದೆ !

ಎಲ್ಲೊ ಸಂಜೆ ಸೂರ್ಯ ಮುಳುಗುವಾಗ
ನಿರಾಸೆಯ ಗಾಳಿ ಮರೆತ ಪ್ರೇಮ ಮರದ
ಒಂದೊಂದು ಎಲೆ ಬೀಳಿಸುತ್ತದೆ
ಏಕಾಂತ ಜೀವನದ ಆಕಾಶದಲಿ
ಸ್ಮರಣೆಯ ನಕ್ಷತ್ರಗಳು ಮಿನುಗುತ್ತದೆ!
by ಹರೀಶ್ ಶೆಟ್ಟಿ, ಶಿರ್ವ

ಶಂಕೆ

ಮನುಜ....
ಶಂಕೆ ವಿಷ ಮುಳ್ಳು ಸಮಾನ
ಕತ್ತಿಯಂತೆ ಹರಿತ
ನೋವಿನ ಗಂಟು
ಸ್ನೇಹ ಹಾಗು ಆಹ್ಲಾದಕರ ಸಂಬಂಧಗಳ ಶತ್ರು
ಶಂಕೆ ಸಂಶಯದಿಂದ ದೂರ ಇರುವುದೇ ಸರಿ
ಯಾವುದೇ ಅನುಮಾನವಿಲ್ಲದೆ ನುಡಿದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಮೌಲ್ಯ

ಮನುಜ.....
ವಿಷ ತುಂಬಿದ ಚಿನ್ನದ ಮಡಕೆಕ್ಕಿಂತ
ಹಾಲು ತುಂಬಿದ ಮಣ್ಣ ಮಡಕೆಗೆ ಬೆಲೆ ಹೆಚ್ಚು
ಹೊರ ಮಾಯಾಜಾಲಕ್ಕಿಂತ
ಒಳ ಗುಣಗಳ ಮೌಲ್ಯ ಹೆಚ್ಚು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಆಲಸ್ಯ

ಮನುಜ.....
ಆಗಲಾರದ ವಿಷಯದ ಕುರಿತು
ಕುಳಿತು ಕನಸನ್ನು ಕಾಣುವುದಕ್ಕಿಂತ
ಎದ್ದು ಆ ವಿಷಯವನ್ನು ಸಾಕಾರ ಮಾಡು
ಆಲಸ್ಯ ಅಂಜಿಕೆಯನ್ನು ಆಚೆ ದೂಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Tuesday, May 29, 2012

ವಿಷ

ಮನುಜ...
ಹುತ್ತದ ಸುತ್ತ ಅಲೆದರೆ
ನಿತ್ಯ ವಿಷ ಸರ್ಪಗಳ ದರ್ಶನ
ವಿಷ ಕೇವಲ ನಿನ್ನ ಭಾಗ್ಯ
ಜೀವನ ನರಕ ಕ್ಷಣ ಕ್ಷಣ

(ಅರ್ಥಾತ್ .....
ಹಾಳು ಮಾರ್ಗ, ದುರ್ಜನರ  ಸಂಗ ಮಾಡಿದ್ದಾರೆ
ಸಿಗುವುದು ಕೇವಲ ಕಷ್ಟ
ಜೀವನದಲ್ಲಿ ಒದಗುವುದು ಕೇವಲ ಕಷ್ಟಗಳು )
by  ಹರೀಶ್ ಶೆಟ್ಟಿ, ಶಿರ್ವ

ಕರ್ತವ್ಯ

ಮನುಜ
ಸಾಗರದ ಆಳ ಅಳೆಯ ಬೇಡ
ಮೊದಲು ನೀನ್ಯಾರೆಂದು ನೀ ಅರಿ
ಭೂಮಿಗೆ ಬಂದು ಹುಡುಕುವಿ ನಿನ್ನನ್ನೆ
ತನ್ನನ್ನು ತಾನು ಪಡೆಯಲು ಕಲಿ
ನಿನ್ನ ಕರ್ತವ್ಯವನ್ನು ಮರೆತು
ಅನ್ಯರ ಬದುಕಲಿ ಆಸಕ್ತಿ ನಿನಗೆ 
ಆಶ್ಚರ್ಯ ಪಡುತ್ತಿದ್ದಾನೆ  ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, May 28, 2012

ಕಷ್ಟ ಕಾಲ ಬೇಕೇ ಬೇಕು

ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !

ಕಲ್ಲು ಮುಳ್ಳು
ಗುಡ್ಡೆ ಪರ್ವತ
ಏರು ಪೇರು
ಜೀವನದಲಿ ಇಂಥ ಅಡಚಣೆ ಬರಲೇ ಬೇಕು!

ಸೋಲು ಸಮಸ್ಯೆ
ನೋವು ವೇದನೆ
ಪೀಡೆ  ಹತಾಶೆ
ಸಹಿಸುವ ಅವಕಾಶ ಸಿಗಲೇ ಬೇಕು!

ಮಳೆ ಬಿರುಗಾಳಿ
ಪ್ರವಾಹ ಸುನಾಮಿ
ಬೆಂಕಿ ಭೂಕಂಪವೆಂಬ
ಪ್ರಾಕೃತಿಕ ವಿಕೋಪ ಎದುರಿಸಲೇ ಬೇಕು !

ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !
by ಹರೀಶ್ ಶೆಟ್ಟಿ, ಶಿರ್ವ

Sunday, May 27, 2012

ಯಾರವನು

ಯಾರವನು
ಕ್ಷಣಾರ್ಧದಲ್ಲಿ ಕಣ್ಣೆದುರಿಗೆ
ಬಂದು ಹೃದಯ ಕದ್ದು ಹೋದ
ಕತ್ತಲ ಬದುಕಲಿ
ದೀಪ ಬೆಳಗಿಸಿ ಹೋದ!

ಯಾರವನು
ರಿಕ್ತ ಕಣ್ಣಲ್ಲಿ ಅನೇಕ ಸ್ವಪ್ನ
ನೀಡಿ ಹೋದ
ಕುಗ್ಗಿದ ಮನಸ್ಸಲಿ
ಉತ್ಸವದ ಆನಂದ ಕೊಟ್ಟು ಹೋದ!

ಯಾರವನು
ಗೂಡಲ್ಲಿದ್ದ ಹಕ್ಕಿಯನ್ನು
ನೀಲ ಗಗನದಲಿ ಹಾರಿಸಿ ಹೋದ
ಬಣ್ಣರಹಿತ ಜೀವನದಲಿ
ಕಾಮನಬಿಲ್ಲಿನ ಬಣ್ಣ ತುಂಬಿ ಹೋದ!

ಯಾರವನು
ತಳಮಳ ಮನ ಸಾಗರದಲಿ
ಶಾಂತತೆ ಪಸರಿಸಿ ಹೋದ
ಮೊದಲ ಮಳೆಯ ಮಣ್ಣಿನ ಸುಗಂಧದಂತೆ
ತನ್ನ ಕಂಪು ಹರಡಿ ಹೋದ!
by ಹರೀಶ್ ಶೆಟ್ಟಿ, ಶಿರ್ವ

Saturday, May 26, 2012

ನಿಯತಿ

ತುಂಡು ತೊಟ್ಟಿಲು 
ತೂಗುವಾಗ ಕರ್ಕಶ ಸ್ವರ 
ಸಡಿಲಾದ ಮೊಳೆ
ಬೀಳುವ ಭಯ
ಮಲಗಿದ ಬಾಲ್ಯ 
ಆದರೂ ಅರಳುತಿದೆ ಮಗುವಿನ ಮುಖದಲಿ ಹಾಸ!

ಹಸಿರು ಫಲಭರಿತ ಮರ
ಗಾಳಿಯ ವೇಗ
ಬೀಳುವ ಹಣ್ಣು
ಪೂರ್ಣ ರಸಭರಿತ
ಹಕ್ಕಿ ಪ್ರಾಣಿಗಳಿಗೆ ಸಂತಸ
ಆದರೂ ಹಲವು ಹಣ್ಣುಗಳಿಗೆ ಕೊಳೆಯುವ ಭಾಗ್ಯ!

ಡೊಂಕು ರಸ್ತೆ 
ವಾಹನದಲಿ ನಿಯಂತ್ರಣ
ಚಂಚಲ ಯೌವನ
ಓಡುವ ಇಂಧನ
ಅಪಘಾತದ ಸಂಭವನ
ಆದರೂ ವೇಗದಿಂದ ತಲುಪುವ ಮನ !

ಸಿಹಿ ನೀರ ಬಾವಿ
ತುಂಬಿದ ಕೊಡಪಾನ
ಎಲ್ಲ ಹಸಿರು ಹಸಿರು
ಪರಿಸರ ಶಾಂತ
ದಣಿದ ಪ್ರವಾಸಿಗರಿಗೆ ಅಮೃತ 
ಆದರೂ ಅನೇಕರ ತಣಿಸದ ದಾಹ !

ಮನ ಚರಂಡಿ ಕಲುಷಿತ ನೀರು
ಎಲ್ಲ ಮಲಿನ ಮಲಿನ
ಜೀವ ಜಂತು ಹೂಳು ಕೊಳೆ ಪಾಚಿ
ಕ್ರಿಮಿ ಕೀಟಗಳ ವಸತಿ
ರೋಗ ದುರ್ವಾಸನೆ ಸೊಳ್ಳೆಗಳು 
ಆದರೂ ಪ್ರಜ್ಞಾಹೀನ ಮನುಜ ಮತಿ !
by ಹರೀಶ್ ಶೆಟ್ಟಿ, ಶಿರ್ವ

Thursday, May 24, 2012

ನನಗೆ ಭಯ

ಗೆಳತಿ
ಇಂದು
ಕನ್ನಡಿಯಲ್ಲಿ
ನನ್ನ ಪ್ರತಿಬಿಂಬ
ನೋಡಿ
ಈಗ
ನೀನು ಎಲ್ಲೊ
ನನ್ನನ್ನು ನೋಡಿದರೆ
ನಿನಗೆ
ತುಂಬಾ ಬೇಸರವಾಗಬಹುದು
ಎಂದು
ನನಗೆ ಭಯ
by ಹರೀಶ್ ಶೆಟ್ಟಿ, ಶಿರ್ವ

ನನ್ನ ಯೋಚನೆ


ಗೆಳತಿ
ಮುಂಜಾನೆ
ಸೂರ್ಯ ಮೂಡಿದ
ನಂತರ
ಸಂಜೆ ಅಸ್ತ
ಆಗುವ ಹಾಗೆ .....
ನನ್ನ ಯೋಚನೆಯು
ಶುರುವಾಗುವುದು
ನಿನ್ನಿಂದಲೇ
ಹಾಗು
ಮುಗಿಯುವುದು
ನಿನ್ನಿಂದಲೇ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಕೊನೆಯ ಪತ್ರ

ಗೆಳತಿ
ನಿನ್ನ ಕೊನೆಯ ಪತ್ರ
ಹಲವು ಸಲ ಓದಿದೆ
ಆದರೆ
ಇಂದೂ
ನನ್ನಿಂದಾದ
ತಪ್ಪು ಏನೆಂದು
ತಿಳಿಯದೆ
ದುಃಖದಿಂದ
ಬಳಲುತ್ತಿದ್ದೇನೆ
by ಹರೀಶ್ ಶೆಟ್ಟಿ,ಶಿರ್ವ

Wednesday, May 23, 2012

ಮಲ್ಲಿಗೆ ಹೂವಿನ ಸುವಾಸನೆ

ಮನೆಗೆ ಬಂದ ಕೂಡಲೇ
ಘಮ ಘಮ
ಮಲ್ಲಿಗೆ ಹೂವಿನ ಸುವಾಸನೆ
ತಿಳಿದೆ
ಅವಳು ಬಂದಿದ್ದಾಳೆ ಎಂದು
by ಹರೀಶ್ ಶೆಟ್ಟಿ, ಶಿರ್ವ

ಮರಳ ಮನೆ


ಅವನು ಸಮುದ್ರದ ತೀರ ಕುಳಿತು ಪರಿಶ್ರಮ ಪಟ್ಟು ಬಹಳ ಸುಂದರ ಮರಳ ಮನೆಯನ್ನ ಕಟ್ಟಿದ, ಎಲ್ಲರೂ ಅವನ ಮನೆ ನೋಡಿ ಮೆಚ್ಚಿದರು. ಸಮುದ್ರದ ನೀರ ಅಲೆಯೊಂದು ವೇಗದಿಂದ ಬಂದು ಅವನ ಸುಂದರ ಮರಳ ಮನೆಯನ್ನು ಧ್ವಂಸ ಗೊಳಿಸಿತು. ನೋಡುವವರಿಗೆ ಎಲ್ಲರಿಗೆ ಬೇಸರವೇ ಬೇಸರ, ಆದರೆ ಅವನು ನಕ್ಕು ಪುನಃ ಆ ಮರಳಿಂದ ಒಂದು ಹೊಸ ನಿರ್ಮಾಣ ಮಾಡಲು ಶುರು ಮಾಡಿದ.
by ಹರೀಶ್ ಶೆಟ್ಟಿ , ಶಿರ್ವ 

ಕಣ್ಣೀರು

ಗೆಳತಿ
ಈಗ
ಕಣ್ಣೀರು ಸಹ
ಕಾಯುತ್ತಿರುತ್ತದೆ
ಹೊರ ಹರಿಯುವ
ಆಸೆಯಲಿ
ಈಗ
ನಾನು
ನಿನ್ನನ್ನು
ನೆನಪಿಸಿ
ಅಳುವುದನ್ನು
ಬಿಟ್ಟು ಬಿಟ್ಟಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

ಪ್ರಾಣ

ಗೆಳತಿ
ಇಂದು
ಜೀವಿಸುವುದು
ನಾನಲ್ಲ
ಕೇವಲ
ನನ್ನ ಶರೀರ....
ಈಗ
ಈ ದೇಹದಲಿ
ಪ್ರಾಣವಿಲ್ಲ
ನಿನ್ನ ಮೈತ್ರಿಯನ್ನು ಕಳೆದು
ಅ ದಿನವೇ
ನಾನು ಸತ್ತಿದೆ.
by ಹರೀಶ್ ಶೆಟ್ಟಿ, ಶಿರ್ವ

Tuesday, May 22, 2012

ಕವನಗಳ ಮೌಲ್ಯ

ಗೆಳತಿ
ನನ್ನ
ಕವನಗಳ ಮೌಲ್ಯ
ಕೇವಲ
ನಿನಗೆ ತಿಳಿದಿತ್ತು
ನೀನಿಲ್ಲದೆ...
ಈಗ
ನನ್ನ ಕವನಗಳಿಗೆ
ಬೆಲೆ ಇಲ್ಲ
by ಹರೀಶ್ ಶೆಟ್ಟಿ, ಶಿರ್ವ

ನೀಲ ಆಕಾಶ ಮಲಗಿದೆ


ನೀಲ ಆಕಾಶ ಮಲಗಿದೆ 
ನೀಲ ಆಕಾಶ ಮಲಗಿದೆ
ಲಾ ರಾ  ಲಾ  ಲಾ  ಲಾ ,ಲಾ  ಲಾ  ಲಾ  ಲಾ 
ಲಾ ರಾ  ಲಾ  ಲಾ  ಲಾ ,ಲಾ  ಲಾ  ಲಾ  ಲಾ  ಹೋ   

ಮಬ್ಬು ಸರಿದು ರಾತ್ರಿ ನೆನೆದು
ತುಟಿಯು ಕಂಪಿಸುತ್ತಿದೆ
ಹೃದಯ ಏನೋ ಹೇಳ ಬಯಸುತ್ತಿದೆ
ನುಡಿಯದೆ ಮಿಡಿಯುತ್ತಿದೆ
ಈ ಏಕಾಂತ ನಾನು ನೀನು 
ಜಮೀನು ಮೌನವಾಗಿದೆ
ನೀಲ ಆಕಾಶ ಮಲಗಿದೆ  

ನನ್ನ ಬಾಹುಗಳ ಬಂದನದಲಿ
ಮೆಲ್ಲ ಮೆಲ್ಲನೆ
ಲಜ್ಜೆಯಿಂದ ನೀ ಬರುವೆ
ಮೋಡದ ಮರೆಯಿಂದ
ಮೆಲ್ಲ ಮೆಲ್ಲನೆ ಚಂದಿರ ಬರುವಂತೆ
ಗಾಳಿಯ ಗೀತೆ ಮಧ್ಯಮವಾಗಿದೆ 
ಸಮಯದ ವೇಗ ಕಡಿಮೆಯಾಗಿದೆ 
ನೀಲ ಆಕಾಶ ಮಲಗಿದೆ
ಲಾ ರಾ  ಲಾ  ಲಾ  ಲಾ ,ಲಾ  ಲಾ  ಲಾ  ಲಾ 
ಲಾ ರಾ  ಲಾ  ಲಾ  ಲಾ ,ಲಾ  ಲಾ  ಲಾ  ಲಾ  ಹೋ   
ನೀಲ ಆಕಾಶ ಮಲಗಿದೆ

ಮೂಲ ರಚನೆ : ಜಾವೇದ್ ಅಖ್ತರ್, ಚಿತ್ರ : ಸಿಲ್ ಸಿಲಾ
ಅನುವಾದ : ಹರೀಶ್ ಶೆಟ್ಟಿ , ಶಿರ್ವ

Neela aasmaan so gaya -2
La ra la ra la, la la la la 
La ra la ra la, la la ra la ho
Neela aasmaan so gaya

O ho, ons barse raat bheege honth tharraaye
Dhadkane kuchh kehna chaahe keh nahin paaye 
Yeh tanhaayi yeh main aur tum -2
Zameen bhi ho gayi gumsum

O, meri baahon mein sharmate lajaate aise tum aaye
Ki jaise baadlon mein chaand dheere dheere aa jaaye 
Hawa ka geet madhyam hai -2
Samay ki chaal bhi kam hai
Neela aasmaan so gaya -2
Neela aasmaan so gaya -2
La ra la ra la, la la ra la
La ra la ra la, la la ra la ho
Neela aasmaan so gaya
www.youtube.com/watch?v=dFhzSfQmeLk

Monday, May 21, 2012

ಮನೆ ಇರಬೇಕು ಅಸ್ತವ್ಯಸ್ತ

ಮನೆ ಇರಬೇಕು
ಅಸ್ತವ್ಯಸ್ತ
ನೀಟಾದ ಮನೆ
ನನಗೆ ಇಷ್ಟವಿಲ್ಲ !

ಗೌಜಿ ಗಲಾಟೆ ಮಾತು
ರಗಳೆ ಜಗಳ
ನಗು ಕೀಟಲೆ 
ಇರಲೇಬೇಕು
ಮೌನವಿದ್ದ  ಮನೆಯಿಂದ
ನನಗೆ ಹೆದರಿಕೆ
ಅಲ್ಲಿ ಇರಲು ನಾ ಬಯಸುವುದಿಲ್ಲ !

ಇದೇನು ಹೀಗೆ ಶಾಂತತೆ
ಮನೆಯಲ್ಲಿ ಮಕ್ಕಳಿಲ್ಲವೆ
ಕಪಾಟಲ್ಲಿ ಎಲ್ಲ ಬಟ್ಟೆಗಳನ್ನು
ಅಚ್ಚುಕಟ್ಟಾಗಿ ಇಟ್ಟಿದ್ದಾರೆ
ಮನೆ ಒಡತಿಗೆ
ಬೇರೇನೂ ಕೆಲಸವಿಲ್ಲವೇ
ಹರಟೆ ಹೊಡೆಯುವುದರಲ್ಲಿ
ಅವಳಿಗೆ ಆಸಕ್ತಿ ಇಲ್ಲವೇ
ಈ ಮನೆ ತುಂಬಾ ವಿಚಿತ್ರ
ಇಲ್ಲಿ ಕೈದಿಯಾಗಿ ಇರಲು ನನಗೆ ಆಗಲಿಕ್ಕಿಲ್ಲ  !

ಅವನೇನು
ಕಚೇರಿಯಿಂದ ಬಂದ ಕೂಡಲೇ
ಸ್ನಾನ ಮಾಡಿ ಬಂದು
ತನ್ನದೇ ಮನೆಯಲ್ಲಿ
ಅತಿಥಿಯಂತೆ ಕೂತುಕೊಂಡಿದ್ದಾನೆ
ಇದು ಮನೆಯೇ ಅಥವಾ ಅತಿಥಿ ಗೃಹವೇ
ಸಾಹೇಬರೇ ಕೆಲಸದಿಂದ ಬಂದು 
ಸ್ವಲ್ಪ ಸುಸ್ತಾಗಿ ಬಿದ್ದು ಕೊಳ್ಳಬಾರದೆ
ಈ ಧರ್ಮಶಾಲೆಯಂತ ಮನೆಯ
ಬಯಕೆ ನನಗಿಲ್ಲ !

ಮನೆ ಇರಬೇಕು
ಅಸ್ತವ್ಯಸ್ತ
ನೀಟಾದ ಮನೆ
ನನಗೆ ಇಷ್ಟವಿಲ್ಲ !
by ಹರೀಶ್ ಶೆಟ್ಟಿ, ಶಿರ್ವ


ನನ್ನ ಹೃದಯ ಉದ್ಯಾನ

ಗೆಳತಿ
ನನ್ನ ಹೃದಯ ಉದ್ಯಾನ
ನೀನೊಂದು ಅರಳಿದ ಹೂವು 
ಅದರ ಸೌಂದರ್ಯ ನಿನ್ನಿಂದಲೇ 
ಬಾಡದಿರು ಪ್ರಿಯೆ
ನನ್ನ ಹೃದಯ ಉದ್ಯಾನವನ್ನು
ಗೋರಿ ಮಾಡದಿರು ಪ್ರಿಯೆ
by ಹರೀಶ್ ಶೆಟ್ಟಿ , ಶಿರ್ವ

ನನ್ನ ಪ್ರೀತಿ ಸಾಗರ

ಗೆಳತಿ
ನನ್ನ ಪ್ರೀತಿ ಸಾಗರ
ಅದರ ಆಳವನ್ನು ಅಳೆಯ ಬೇಡ
ನೀ ನನ್ನ ಪ್ರೀತಿ ಸಾಗರದಲಿ
ಈಜುವ ಮೀನಾಗು
by ಹರೀಶ್ ಶೆಟ್ಟಿ , ಶಿರ್ವ

Sunday, May 20, 2012

ಆಸರೆ

ತವರು ಮನೆ ಬಿಟ್ಟು
ನಿನ್ನೊಂದಿಗೆ ಸಂಸಾರ ಹೂಡಿದೆ
ನೀನೆ ಸರ್ವಸ್ವ ಎಂದು ಭಾವಿಸಿ
ನಿನ್ನನ್ನು ಪೂಜಿಸಿ ಸೇವೆ ಮಾಡಿದೆ
ಮಂದಿರ ಮಾಡಿದ ಮನೆಯಲ್ಲಿ
ಈಗ ಕೇವಲ ನಿನ್ನ ರೌದ್ರ ರೂಪ
ನಾನು ನಂಬಿದ ದೇವರು ಅಲ್ಲಿಲ್ಲ !

ನೀನೆ ನನ್ನ ಭಾಗ್ಯವೆಂದು ತಿಳಿದು
ನಿನ್ನ ಸುಖ ಕಷ್ಟಗಳನ್ನು
ನನ್ನದೆಂದು ಸ್ವೀಕರಿಸಿದೆ
ಆದರೆ ನನ್ನ ಔದಾರ್ಯದ
ನಿನಗೆ ಪರವೆ ಇಲ್ಲ
ಹೊರ ಪುಷ್ಪಗಳ ಸುಗಂಧದಲಿ ಲಿಪ್ತ ನಿನಗೆ
ಬಾಡಿದ ಮನೆ ಹೂವಿನ ಗೋಷ್ಠಿ ಇಲ್ಲ !

ನಿನ್ನ ಜೀವನ ಬೆಳಗಿಸಿದ
ನನಗೆ ಕರಿ ಕತ್ತಲೆಯ ಉಡುಗೊರೆ
ಅಲ್ಲಿ ಈಗ ಬೆಳಕಿನ ಕಿರಣವಿಲ್ಲ
ಜಗತ್ತಿನ ಜಗಮಗದಲಿ
ಮರೆಯಾದ ನಿನಗೆ
ನಿನ್ನ ಸಂಸಾರದಲಿ
ಅಂಧಕಾರವಾದದ್ದು ಗೊತ್ತಿಲ್ಲ !

ನೀನೆ ನನ್ನ ಆಸರೆ
ಎಂದು ಭಾವಿಸಿದ ನನಗೆ
ಈಗ ಆಶ್ರಯವಿಲ್ಲದಾಗಿದೆ
ನನ್ನ ಜೀವನದಲಿ ಬರೆದ ನಿನ್ನ ಹೆಸರು
ನನ್ನ ಕಣ್ಣೀರಿಂದ ಅಳಿಸಿ ಹೋಗಿದೆ
ನಿನ್ನನ್ನು ಇನ್ನೂ ನಂಬಿ ಪ್ರಯೋಜನವಿಲ್ಲ
ಈಗ ನನಗೆ ನಿನ್ನಲ್ಲಿ ಆಸೆ ಇಲ್ಲ !
by ಹರೀಶ್ ಶೆಟ್ಟಿ, ಶಿರ್ವ

Saturday, May 19, 2012

ಪ್ರೇಮ ಪತ್ರ

ಗೆಳತಿ
ನಿನ್ನ
ಪ್ರೇಮ ಪತ್ರಗಳನ್ನೆಲ್ಲ
ನೀನು ಹೇಳಿದ ಪ್ರಕಾರ
ಸುಟ್ಟು ಬೂದಿ ಮಾಡಿ ಬಿಟ್ಟೆ
ಆದರೆ
ಕ್ಷಮಿಸು
ನನ್ನ ಹೃದಯದಲಿ
ತುಂಬಿದ ಪ್ರೀತಿ
ನನ್ನ ದೇಹ ಸುಟ್ಟರೂ
ಬೂದಿಯಾಗದು
by ಹರೀಶ್ ಶೆಟ್ಟಿ, ಶಿರ್ವ

Thursday, May 17, 2012

ನಿಸರ್ಗದ ಸೌಂದರ್ಯ

ಗೆಳತಿ.....
ಅಂದು
ಪ್ರೀತಿಯ ಆ ದಿನಗಳಲ್ಲಿ
ನನಗೆ
ನದಿ ಸರೋವರ
ಪರ್ವತ
ಪ್ರಾಣಿ ಪಕ್ಷಿಗಳು
ಗಿಡ ಮರಗಳು
ವೃಕ್ಷದ ನೆರಳು
ಮುಂಜಾನೆಯ ಸೂರ್ಯ
ರಾತ್ರಿಯ ಚಂದಿರ ನಕ್ಷತ್ರಗಳು
ಎಲ್ಲವೂ ಎಷ್ಟು ಸುಂದರವಾಗಿ ಕಾಣುತ್ತಿತ್ತು......
ಆದರೆ ಇಂದು...
ನಿಸರ್ಗದ
ಈ ಎಲ್ಲ ಸೌಂದರ್ಯಗಳನ್ನು
ಕಣ್ಣೀರ ಕಣ್ಣುಗಳಿಂದ
ನೋಡುವಾಗ
ಎಲ್ಲವೂ
ಮಸುಕಾಗಿ ಕಾಣುತ್ತದೆ......
by ಹರೀಶ್ ಶೆಟ್ಟಿ, ಶಿರ್ವ

ಮುಂಜಾನೆಯ ಸಮಯ

ಮುಂಜಾನೆಯ ಸಮಯ
ಸೂರ್ಯನ ಬೆಳಕು
ಹಕ್ಕಿಗಳ ಚಿಲಿ ಪಿಲಿ
ಗಿಡ ಮರಗಳ ಸರ ಸರ
ನದಿಯ ಜರ ಜರ
ಹೂಗಳ ಉತ್ಸಾಹ
ದುಂಬಿಗಳ ಉಲ್ಲಾಸ
ಚಿಟ್ಟೆಯ ಆನಂದ
ನಿಸರ್ಗದ ಸೌಂದರ್ಯ
ಹೇ ಮನುಜ.... ನೀನೇಕೆ ಇಷ್ಟು ಆಲಸಿ
ಎದ್ದೇಳು.....ಏಳು ಬೆಳಗಾಯಿತು.....
by ಹರೀಶ್ ಶೆಟ್ಟಿ, ಶಿರ್ವ

Tuesday, May 15, 2012

ನಕ್ಷತ್ರ

ಒಂದು ನಕ್ಷತ್ರ ಬಾನಲ್ಲಿ ಮಿನುಗುತ್ತಿತ್ತು
ಕೆಲವರು ನಲಿಯುತ್ತಿದ್ದರು ಇಷ್ಟ ಪಟ್ಟು
ಕೆಲವರು ಹೇಳಿದರು ಅದೊಂದು ಅಪತ್ತು
ನಕ್ಷತ್ರ ಮಿನುಗುತ್ತಲೇ ಇತ್ತು
by ಹರೀಶ್ ಶೆಟ್ಟಿ, ಶಿರ್ವ

ಉದ್ಯಾನ

(ಇದು ಕವಿತೆ ಕವನ ಅಲ್ಲ .....ಹೀಗೆಯೇ ಒಂದು ಕಲ್ಪನೆ)
ಅಂದು ಮುಂಜಾನೆ
ಉದ್ಯಾನದಲ್ಲಿ
ಅವಳನ್ನು ನೋಡಿದೆ
ಹದಿಮೂರರ  ಹರೆಯದ
ಚಿಕ್ಕ ಸುಂದರ ಹುಡುಗಿ
ಯಾರನ್ನೋ ಹುಡುಕುತ್ತಿದ್ದಳು
ಗಾಬರಿಯಾಗಿದ್ದಳು
ಅಲ್ಲಿ ಇಲ್ಲಿ ದೃಷ್ಟಿ ಹಾಕುತ
ಹಿಂದೆ ಮುಂದೆ ನೋಡುತ
ನಾನು ಅವಳನ್ನೇ ನೋಡುತ್ತಿದ್ದೆ
ನನ್ನ ಕಡೆ ಅವಳ ಗಮನ ಹೋದಾಗ
ಹೆದರಿ ಸಂಕುಚಿತಲಾದಳು !

ಯಾರೋ ಕಿರುಚಿದ ದ್ವನಿ
ಅದು ಅವಳೇ
ಯಾರೋ ಅವಳನ್ನು
ಹಿಡಿದು ಎಳೆಯುತ್ತಿದ್ದರು
ಅವಳು ನನ್ನಲ್ಲಿ
ಸಹಾಯಕ್ಕಾಗಿ ದೀನ
ದೃಷ್ಟಿಯಿಂದ ನೋಡುತ್ತಿದ್ದಳು
ನಾನು ಅವರ ಹಿಂದೆ ಓಡಿದೆ
ನನ್ನನ್ನು ನೋಡಿ ಅವರು
ಅವಳನ್ನು ಬಿಟ್ಟು
ನನ್ನ ಮೇಲೆ ಆಕ್ರಮಣ ಮಾಡಿದರು
ನಾನು ಅವರನ್ನು ಧೈರ್ಯದಿಂದ ಎದುರಿಸುತ
ಹೇಗೋ ಅವರನ್ನು ಅಲ್ಲಿಂದ ಓಡಿಸಿದೆ !

ಅವಳು ಈಗಲೂ ಭಯಭೀತ
ನನ್ನನ್ನು ಆತ್ಮಿಯ ಭಾವದಿಂದ
ನೋಡುತ್ತಿದ್ದಳು
ನಾನು ಅವಳನ್ನು ಎಬ್ಬಿಸಿ
ಮನೆಗೆ ಕರೆದುಕೊಂಡು ಬಂದೆ
ವರ್ಷನೋ ವರ್ಷ ಕಳೆಯಿತು
ಈಗ ಅವಳು ನಮ್ಮ ಮಗಳು
ಅವಳ ಹೆಸರು
ನಾವೇ ನಾಮಕರಣ ಮಾಡಿದ್ದು 
ಉದ್ಯಾನ !
by  ಹರೀಶ್ ಶೆಟ್ಟಿ, ಶಿರ್ವ

Monday, May 14, 2012

ನಿನ್ನ ಆ ಒಂಚೂರು ಪ್ರೀತಿ

ನಿನ್ನ ಆ ಒಂಚೂರು ಪ್ರೀತಿ
ನನಗೆ ಇಂದೂ ಮರೆಯಲಾಗಲಿಲ್ಲ
ಆ ಒಂಚೂರು ಪ್ರೀತಿಯ ಮರೆಯಲಿ
ಅಡಗಿ ಹೋಯಿತು
ನಿನ್ನ ಶುಷ್ಕ ವ್ಯವಹಾರ
ನಿನ್ನ ಅನವಶ್ಯಕ ಕೋಪ
ನಿನ್ನ ಹೃದಯ ಭೇದಿಸುವ ಮಾತುಗಳು!

ನಿನ್ನ ಅಲ್ಪ ಸಮಯದ ಆ ಜೊತೆ
ಇಂದು ನನ್ನನ್ನು
ಕಣ್ಣೀರ ಸಾಗರದಲಿ ಮುಳುಗಿಸಿದೆ
ಸಹನಶೀಲತೆ ಮುಗಿದಿದೆ 
ಪ್ರೀತಿಯ ಆ ತುಂತುರು ಮಳೆ
ಇಂದೂ ನನ್ನ ಮನಸ್ಸಿನ
ನೋವ ಸಸಿಯನ್ನು
ಮರವಾಗಿ ಬೆಳೆಸಿದೆ !

ವಸಂತ ಋತು ಸಮಯದ
ನಮ್ಮ ಪ್ರೀತಿಯ ಪ್ರಥಮ ಮಿಲನ
ಇಂದು ದುಃಖದ
ಶರತ್ಕಾಲದ ಋತುವಾಗಿ 
ಪ್ರೀತಿಯ ಎಲೆಗಳೆಲ್ಲ
ಒಂದೊಂದಾಗಿ ಉದುರಿ ಹೋಗಿದೆ
ಆದರೂ ನಿನ್ನ ಆ ಒಂಚೂರು ಪ್ರೀತಿ
ನನಗೆ ಇಂದೂ ಮರೆಯಲಾಗಲಿಲ್ಲ !
by ಹರೀಶ್ ಶೆಟ್ಟಿ, ಶಿರ್ವ

ನನ್ನ ಪ್ರೀತಿ

ಗೆಳತಿ...
ನನ್ನ ಪ್ರೀತಿ
ನಿನಗೆ ಬೇಕಾದ
ಆ ಮುತ್ತು ರತ್ನಗಳಂತೆ
ದುಬಾರಿ ಇಲ್ಲದಿರಬಹುದು
ನನ್ನ ಪ್ರೀತಿಗೆ ಬೆಲೆ ಕಟ್ಟ ಬೇಡ..
ಆದರೆ ಸಾಗರದಲಿ
ಎಷ್ಟು ಮುತ್ತು ರತ್ನಗಳಿವೆಯೋ
ಅಷ್ಟೇ ನನ್ನ ಹೃದಯದಲಿ
ನಿನ್ನ ಪ್ರತಿ ಪ್ರೀತಿ ತುಂಬಿದೆ
ಎಂದು ಮರೆಯ ಬೇಡ
by ಹರೀಶ್ ಶೆಟ್ಟಿ, ಶಿರ್ವ

Sunday, May 13, 2012

ನೆನಪ ನಕ್ಷತ್ರಗಳು

ಗೆಳತಿ 
ನೀ ನನ್ನನ್ನು ಬಿಟ್ಟು ಹೋದ ನಂತರವೂ
ನನ್ನ ಹೃದಯ ಮನಸ್ಸ ಬಾನಲ್ಲಿ
ನಿನ್ನದೆ ನೆನಪ ನಕ್ಷತ್ರಗಳು ಮಿನುಗುತ ಇರುತ್ತದೆ
ಅದನ್ನೇ ಲೆಕ್ಕ ಮಾಡುತ
ರಾತ್ರಿ ನಿದ್ದೆ ಇಲ್ಲದೆ
ಮುಂಜಾನೆ ಆದಂತೆ
ವಾಸ್ತವದ ಸೂರ್ಯ ನನಗೆ
ನೀನು ಈಗ ಇಲ್ಲವೆಂದು ಎಚ್ಚರಿಸುತ್ತದೆ!
by ಹರೀಶ್ ಶೆಟ್ಟಿ, ಶಿರ್ವ

"ಅಮ್ಮ"

ಹೆತ್ತು ನಮ್ಮನ್ನು ಜಗದಲಿ ತರುವವಳು "ಅಮ್ಮ"
ತನ್ನ ಎದೆ ಹಾಲು ಕುಡಿಸಿ ಪೋಷಿಸುವವಳು "ಅಮ್ಮ "
ತೋರಿಸಿ ಗಗನದ ಚಂದಿರ ಉಣಿಸುವವಳು "ಅಮ್ಮ"
ನಾವು ನುಡಿಯುವ ಪ್ರಥಮ ಪದ "ಅಮ್ಮ"
ಜೀವನದಲಿ ನಾವು ಕಾಣುವ ಪ್ರಥಮ ದೇವರು "ಅಮ್ಮ"
ಅಮ್ಮಂದಿರ ದಿನಾಚರಣೆಯ ಶುಭಾಶಯಗಳು.....
by ಹರೀಶ್ ಶೆಟ್ಟಿ, ಶಿರ್ವ

ನೀನೆಲ್ಲಿ?

ನೀನೆಲ್ಲಿ?
ಜಗದ ಈ ಓಟದಲ್ಲಿ ನೀನು ಎಲ್ಲಿ?
ನೀನು ಕೇವಲ ನಿನ್ನ ಜಗದಲ್ಲಿ
ನೀನು ನಿನ್ನ ಪುಟ್ಟ ಸಂಸಾರ!

ಅಲ್ಲಿ ಇಲ್ಲಿ ಏನು ನಡೆಯುತ್ತಿದೆ
ನಿನಗೆ ಗೋಚರವಿಲ್ಲ
ಸಭಾ ಸಮಾರಂಭದಲ್ಲಿ
ಪಾಲ್ಗೊಳ್ಳುವುದರಲ್ಲಿ ನಿನಗೆ ರುಚಿ ಇಲ್ಲ
ಜಗದ ಮಾನ ಸಮ್ಮಾನದಲ್ಲಿ ನೀನಿಲ್ಲ
ಜಗದ ಈ ಓಟದಲ್ಲಿ ನೀನು ಎಲ್ಲಿಯೂ ಇಲ್ಲ !

ನೀನು ನಿನ್ನ ಸುತ್ತ ಮುತ್ತ ಬೇಲಿಯ ಕಟ್ಟಿ
ಅದರ ಮಧ್ಯೆ ಅವಿತು ಕೊಂಡು
ತನ್ನದೇ ರಾಜ್ಯ ನಡೆಸುತ್ತಿದ್ದಿ
ಜಗದ ರಾಜ್ಯದಲ್ಲಿ ನಿನಗೆ ಆಸಕ್ತಿ ಇಲ್ಲ
ಜಗದ ಹಾಗು ಹೋಗುಗಳ ನಿನಗೆ ಪರವೇ ಇಲ್ಲ
ಜಗದ ಈ ಓಟದಲ್ಲಿ ನೀನು ಎಲ್ಲಿಯೂ ಇಲ್ಲ !

ನಿನ್ನಷ್ಟಕ್ಕೆ ನೀನು
ಪರ ಸುಖ ದುಃಖದಲ್ಲಿ ನೀನಿಲ್ಲ
ನೆರೆ ಮನೆಯಲ್ಲಿ ಬೆಂಕಿ ಬಿದ್ದರು ನಿನಗೆ ಬೇಜಾರ ಇಲ್ಲ
ಯಾರು ಮಿತ್ರರಿಲ್ಲ ಶತ್ರುಗಳ ಕಾಟ ಬೇಕಿಲ್ಲ
ಬಂಧ ಅನುಬಂಧ ಸಂಬಂಧ ಏನೆಂದು ಗೊತ್ತಿಲ್ಲ
ಜಗದ ಈ ಓಟದಲ್ಲಿ ನೀನು ಎಲ್ಲಿಯೂ ಇಲ್ಲ !

ಯಾಕೆ ನೀನು ?
ಯಾಕೆ ಹುಟ್ಟಿ ಬಂದದ್ದು ನೀನು ಈ ಜಗದಲ್ಲಿ
ಏನು ಅಗತ್ಯ ನಿನ್ನ ಈ ಪ್ರಪಂಚದಲ್ಲಿ
ನೀನೊಂದು ಅಗತ್ಯವಿಲ್ಲದ ಕಾಡು ಬಳ್ಳಿ
ದೂಡ ಬೇಕು ನಿನಗೆ ಪಾಳು ಬಾವಿಯಲ್ಲಿ
ಜಗದ ಈ ಓಟದಲ್ಲಿ ನೀನು ಎಲ್ಲಿ????
by ಹರೀಶ್ ಶೆಟ್ಟಿ, ಶಿರ್ವ

Saturday, May 12, 2012

ಉದ್ಯಾನದ ಹೂಗಳು

ಅವಳಿಲ್ಲದೆ
ಉದ್ಯಾನದ ಹೂಗಳು ಈಗ ಶಾಂತವಾಗಿದೆ
ಅಂದು
ತನ್ನ ಪರಿಮಳ ಬೀರುತ್ತಿದ್ದ
ಮಲ್ಲಿಗೆ, ಸಂಪಿಗೆ, ಗುಲಾಬಿ ಹೂಗಳು
ಇಂದು
ನನ್ನನ್ನು ಅನುಕಂಪದಿಂದ ನೋಡುತ್ತಿದೆ  !
by ಹರೀಶ್ ಶೆಟ್ಟಿ, ಶಿರ್ವ

ನಿಸ್ಸಹಾಯ ಪ್ರೀತಿ

ಎಷ್ಟು ಸುಲಭ ಅಲ್ಲವೇ ಗೆಳೆಯ
ಹೇಳುವುದು
ನನ್ನನ್ನು ಮರೆ ಎಂದು
ಆದರೆ ಎಷ್ಟು ಕಠಿನ ಅಲ್ಲವೇ
ಮರೆಯುವುದು ಅಂದರೆ !

ನೀ ಹೇಳಿದಕ್ಕೆ
ನಾನು ಪ್ರಯತ್ನಿಸುವೆ
ನನ್ನ ಹೃದಯವನ್ನು ಸಾವರಿಸುವೆ
ನಿನ್ನ ಮಾತನ್ನು ನಾನು
ನಿರಾಕರಿಸಲಾರೆ ಗೆಳೆಯ !

ಸುರಿಮಳೆಯಲ್ಲಿ ಶುರುವಾದ
ನಮ್ಮ ಪವಿತ್ರ ಪ್ರೀತಿ
ಇಂದು ಕಣ್ಣೀರ ಹನಿಯಾಗಿ ಹರಿಯುತ್ತಿದೆ
ಆದರೆ ನಿನ್ನ ತ್ಯಾಗ ಆದರ್ಶವನ್ನು
ನಾನು ಮೆಚ್ಚುವೆ ಗೆಳೆಯ !

ನೀನು ನನ್ನಿಂದ ದೂರವಾಗುವುದು
ನನ್ನ ಭಾಗ್ಯ ನಿನ್ನ ನಿಸ್ಸಹಾಯಕತೆ
ಆದರೆ ನಾನು ಅರಿಯುವೆ ನಿನ್ನ ವ್ಯಥೆ
ನಿನ್ನ  ಮನಸ್ಸು ಹೃದಯ
ಎಷ್ಟು ಅಳುತ್ತಿದೆ ಎಂದು ನನಗೆ ತಿಳಿದಿದೆ ಗೆಳೆಯ !

ಹೋಗು ಗೆಳೆಯ ಹೋಗು
ನನ್ನಿಂದ ದೂರ ಹೋಗು
ಸುಖವಾಗಿ ಬಾಳು
ಇಂದು ಹರಿಯುತ್ತಿರುವ ನನ್ನ ಕಣ್ಣೀರು ಸಹ
ಕೇವಲ ನಿನ್ನ ಸುಖವನ್ನೇ ಬೇಡುತ್ತಿದೆ ಗೆಳೆಯ !
by ಹರೀಶ್ ಶೆಟ್ಟಿ, ಶಿರ್ವ

ಅಹಂಕಾರ

ನಿನ್ನನ್ನು ಮರೆಯಬೇಕೆಂದು ಅಹಂಕಾರದಲ್ಲಿ ನನ್ನಲ್ಲಿದ್ದ
ನಿನ್ನ ನೆನಪನ್ನು ಸುಟ್ಟು ಬೂದಿ ಮಾಡಿದೆ
ಆದರೆ ನಿನ್ನ ನೆನಪು ಬೂದಿ ಆಗಲಿಲ್ಲ
ನಿನ್ನನ್ನು ಮರೆಯಲಾಗದೆ ನನ್ನ ಅಹಂಕಾರ ಸುಟ್ಟು ಬೂದಿ ಆಯಿತು.....
by ಹರೀಶ್ ಶೆಟ್ಟಿ, ಶಿರ್ವ

Thursday, May 10, 2012

ನೆನಪಿನ ದ್ವಾರ

ಮುಚ್ಚಿದೆ ನಾನು ನಿನ್ನ ನೆನಪಿನ ದ್ವಾರ
ಬೇಡ ಇನ್ನು ಬೇಡ
ಈ ಅನವಶ್ಯಕ ವೇದನೆ ನೀಡುವ ಚಾಳಿ 
ಪಡೆಯುತ್ತಿದ್ದೆ ನಾ ಸುಖ ಮಧುರ
ನೆನಪ ತಂಗಾಳಿ
ಮರೆಯುತ್ತಿದ್ದೆ ಎಲ್ಲ ಕಷ್ಟಗಳ ಹಾವಳಿ
ಮುಳುಗುತ್ತಿದ್ದೆ ನಿನ್ನ ಕನಸಲಿ !

ಆದರೆ ಈಗ ಮುಚ್ಚಿದೇನೆ ಈ ದ್ವಾರ
ನಿನ್ನ ಸ್ಮೃತಿ ಬರಲಾರದು
ಯಾಕೆಂದರೆ
ನಿನ್ನ ನೆನಪ ಸಂಗಡ ಬರುತ್ತಿತ್ತು
ಉದುರಿದ ಶರತ್ಕಾಲದ ಹಳದಿ ಎಲೆಗಳು
ಟೊಳ್ಳು ಶಬ್ದಗಳ ಒಣಗಿದ ಶಾಖೆಗಳು
ನೀರಸವಾದ ಕ್ಷಮೆಗಳು
ಬೇಡಾದ ಆಪಾದನೆಗಳು
ದೂರ ಸರಿಸುತ್ತಿರುವ ಬೇಸರಗೊಳಿಸುವ ಧೂಳುಗಳು
ವ್ಯಂಗದ ಶೂಲಗಳು !

ಹೌದು ಮುಚ್ಚಿದ್ದೇನೆ ನಾನು
ಈಗ ಈ ದ್ವಾರ
ಬರಲಾರದು ಇನ್ನು
ನಿನ್ನ ನೆನಪಿನ ಮೂಡಲಗಾಳಿ!
by ಹರೀಶ್ ಶೆಟ್ಟಿ, ಶಿರ್ವ

Wednesday, May 9, 2012

ಬಿಳಿ ಪುಷ್ಪ

ನಾ ನಿನ್ನಿಂದ
ಕೋಪಿಸಲು ಬಯಸುವೆ ಪ್ರಿಯೆ
ನಿನ್ನಿಂದ ದೂರ ಹೋಗಿ
ಬರಲಾರೆ ಎಂದು ಯೋಚಿಸುವೆ ಪ್ರಿಯೆ 
ಆದರೆ ನಮ್ಮ
ಪ್ರಥಮ ಭೇಟಿಯಲಿ ನೀ ಕೊಟ್ಟ
ಬಿಳಿ ಪುಷ್ಪಗಳ ಸುಗಂಧ
ನಿನ್ನಿಂದ ನನ್ನನ್ನು
ದೂರ ಮಾಡಲಾರದು ಪ್ರಿಯೆ !

ನಿನ್ನನ್ನು ಮರೆಯುವ
ನನ್ನ ಈ ಎಲ್ಲ ಪ್ರಯತ್ನ
ಎಂದೂ ಸಫಲವಾಗದು ಪ್ರಿಯೆ
ವಸಂತ ಋತುವಲಿ
ಅರಳುವ ಸುಂದರ
ಬಿಳಿ ಪುಷ್ಪಗಳನ್ನು ನೋಡುವಾಗ
ಸದಾ ನಿನ್ನ ನೆನಪು ತಾಜವಾಗುತ್ತದೆ ಪ್ರಿಯೆ
ನಿನ್ನ ಪ್ರೀತಿಯ ಪರಿಮಳ
ನನ್ನಲ್ಲಿ ಹರಡುತ್ತದೆ ಪ್ರಿಯೆ !

ಈ ಹೂವಿನ ಹೆಸರು
ನನಗೆ ತಿಳಿದಿಲ್ಲ  ಪ್ರಿಯೆ
ಜೀವನದಲಿ ಎಂದೂ ನಾನು
ನಿನ್ನಿಂದ ದೂರವಿದ್ದಾಗ
ಜೇವನದ ಪ್ರತಿ ಏಕಾಂತದಲಿ
ಈ ಬಿಳಿ ಪುಷ್ಪಗಳ ವಸಂತ
ನನ್ನಲ್ಲಿಯೇ ಅರಳಿ
ನಿನ್ನ ಸುಂದರ ಪ್ರೀತಿಯ
ನೆನಪು ನನ್ನನ್ನು ಪುಳಕಿತಗೊಳಿಸುವುದು ಪ್ರಿಯೆ  !
by ಹರೀಶ್ ಶೆಟ್ಟಿ, ಶಿರ್ವ

ಮಂಜಿನ ಹನಿ

ಒಣಗಿದ ಮರದ ಶಾಖೆಯಲಿ
ತೂಗುವ
ಮಂಜಿನ ಹನಿಯಂತೆ
ನಿನ್ನ ನಿರೀಕ್ಷೆಯಲಿ
ತೂಗುತ್ತಿದೆ
ನನ್ನ ಭರವಸೆಯ ಕಣ್ಣೀರ ಹನಿ
by ಹರೀಶ್ ಶೆಟ್ಟಿ, ಶಿರ್ವ

Tuesday, May 8, 2012

ಸಂಜೆ ಆದಂತೆ

ಸಂಜೆ ಆದಂತೆ 
ನೆನಪ ಬಾಗಿಲು ತೆರೆದು 
ಬೇಜಾರ ಮನಸ್ಸಿಂದ 
ನಿನ್ನನ್ನು ಹುಡುಕಲು
ಅಲ್ಲಿ ಇಲ್ಲಿ ಅಲೆಯುತ್ತೇನೆ !

ನೀನು ಬರುತ್ತಿದ್ದ
ಸ್ಥಾನದಲ್ಲಿ ಕುಳಿತು
ಗಾಳಿಯ ಸ್ಪರ್ಶದಿಂದ
ನಿನ್ನ ಉಪಸ್ಥಿತಿಯ ಸುಗಂಧವನ್ನು ಪಡೆಯಲು
ವೇದನೆಯಿಂದ ಬಳಲುತ್ತೇನೆ !

ನೀನು ಬರುತ್ತಿದ್ದ ಮಾರ್ಗದಲ್ಲಿ
ನಿನ್ನ ಗೆಜ್ಜೆಯ ಸ್ವರವನ್ನು ಕೇಳಲು
ನಿನ್ನ ಲಜ್ಜೆಯಿಂದ ಕೆಂಪಾಗುವ
ಮುಖ ನೋಡಲು
ಆತುರ ಪಡುತ್ತೇನೆ  !

ಆದರೆ ಬೇಸರದಿಂದ
ನೆನಪು ಕಣ್ಣೀರಾಗಿ ಹರಿದು ಬಂದು
ನಾನು ನನ್ನ ಮೌನ
ಮನಸ್ಸನ್ನು ಗಟ್ಟಿ ಮಾಡಿ
ಕುಗ್ಗಿದ ಮನಸ್ಸಿಂದ ಹಿಂತಿರುಗಿ ಬರುತ್ತೇನೆ !
by ಹರೀಶ್ ಶೆಟ್ಟಿ, ಶಿರ್ವ


ಸ್ವಪ್ನ ಒಂದು ನೋಡಿ

ಸ್ವಪ್ನ ಒಂದು ನೋಡಿ ನಿನ್ನ ಬಯಸಿದೆ
ದೂರದಿಂದ ಪ್ರೀತಿಸಿ ನಿನ್ನ ಪೂಜಿಸಿದೆ!

ನಿನ್ನದೆ ರೂಪ ನನ್ನ ಮನಸ್ಸಲಿ
ನಿನ್ನದೆ ಸುಗಂಧ ನನ್ನ ಶ್ವಾಸದಲಿ
ಸಿಕ್ಕಿ ಬಿದ್ದೆ ನಾ ನಿನ್ನ ಕೇಶ ರಾಶಿಯ ಜಾಲದಲಿ
ಕನಸ ಕೋಟೆ ಕಟ್ಟುವೆ ನಿನ್ನ ಪ್ರೇಮದಲಿ!

ಸ್ವಪ್ನ ಒಂದು ನೋಡಿ ನಿನ್ನ ಬಯಸಿದೆ
ದೂರದಿಂದ ಪ್ರೀತಿಸಿ ನಿನ್ನ ಪೂಜಿಸಿದೆ!

ನನ್ನ ಹೃದಯ ನಿನ್ನ ಶರಣದಲಿ
ಬಾ ಪ್ರೇಯಸಿ ನನ್ನ ಅಲಿಂಗನದಲಿ
ನಿನ್ನದೆ ಚಿತ್ರ ನನ್ನ ನಯನದಲಿ
ಪ್ರೀತಿ ದೀಪ ಉರಿಯುತ್ತಿದೆ ನಿನ್ನ ನಿರೀಕ್ಷೆಯಲಿ!

ಸ್ವಪ್ನ ಒಂದು ನೋಡಿ ನಿನ್ನ ಬಯಸಿದೆ
ದೂರದಿಂದ ಪ್ರೀತಿಸಿ ನಿನ್ನ ಪೂಜಿಸಿದೆ!
by ಹರೀಶ್ ಶೆಟ್ಟಿ, ಶಿರ್ವ

ಇರುವೆ

ಇರುವೆ
ನೀನೆಷ್ಟು ಬುದ್ಧಿವಂತೆ
ನಾ ನಿನ್ನಿಂದ ಕಲಿಯುವೆ

ಯಾವುದೇ ಅಡೆತಡೆಗಳನ್ನು
ನೀನು ಎಷ್ಟು ಸುಲಭವಾಗಿ ಎದುರಿಸುವೆ
ನಾ ನಿನ್ನಿಂದ ಸುಲಭವಾಗಿ ಎದುರಿಸುವ
ಈ ಗುಣ ಕಲಿಯುವೆ

ಬೇಸಿಗೆಯಲ್ಲಿ ನೀ ಚಳಿಗಾಲಕ್ಕಾಗಿ
ಯೋಜನೆ ರೂಪಿಸುವೆ
ನಾ ನಿನ್ನಿಂದ ಯೋಜಿಸುವ
ಈ ಗುಣ ಕಲಿಯುವೆ

ಚಳಿಗಾಲದ ಕಷ್ಟದ ದಿನಗಳಲ್ಲಿ
ತಾಳ್ಮೆಯಿಂದ ಗ್ರೀಷ್ಮ ಋತುವನ್ನು ಕಾಯುವೆ
ನಾ ನಿನ್ನಿಂದ ತಾಳ್ಮೆಯ
ಈ ಗುಣ ಕಲಿಯುವೆ

ಜೀವನದ ಪ್ರತಿಯೊಂದು ಕ್ಷಣ
ನೀ ಆನಂದದಿಂದ ಕಳೆಯುವೆ
ನಾ ನಿನ್ನಿಂದ ಪ್ರತಿಕ್ಷಣ ಸಂತೋಷದಲ್ಲಿ ಇರುವ
ಈ ಗುಣ ಕಲಿಯುವೆ

ಯಾವುದೇ ಸಣ್ಣ ದೊಡ್ಡ ಕಠಿನ ಕಾರ್ಯ
ಬದ್ಧತೆಯಿಂದ ಹಾಗು ಅತ್ಯುತ್ತಮ ಮಾಡಲು ನೀ ಪ್ರಯತ್ನಿಸುವೆ
ನಾ ನಿನ್ನಿಂದ ಪ್ರಯತ್ನ ಹಾಗು ಬದ್ದತೆಯ
ಈ ಗುಣ ಕಲಿಯುವೆ

ತಂಡವನ್ನು ಒಟ್ಟುಗೂಡಿಸಿ ಜತೆಯಲ್ಲಿ
ಹೆಚ್ಚು ಕಾರ್ಯ ನೀ ನಿರ್ವಹಿಸುವೆ
ನಾ ನಿನ್ನಿಂದ ತಂಡ ಮಾಡಿ ಕಾರ್ಯ ಸಾಧಿಸುವ
ಈ ಗುಣ ಕಲಿಯುವೆ

ತನ್ನ ನಾಯಕನ ಹಿಂದೆ ನಮ್ರತೆಯಿಂದ
ನಡೆದು ಎಲ್ಲ ನಿಯಮಗಳನ್ನು ಪಾಲಿಸುವೆ
ನಾ ನಿನ್ನಿಂದ ವಿನಯ ನಮ್ರತೆಯ
ಈ ಗುಣ ಕಲಿಯುವೆ

ನೀ ಸರಣಿಯಾಗಿ ಚಲಿಸಿ ಮಾರ್ಗದ ಕಡೆ ಮುನ್ನಡೆದು
ಉತ್ತಮ ಸಂವಹನ ಜಾಲ ರಚಿಸುವೆ
ನಾ ನಿನ್ನಿಂದ ಉತ್ತಮ ಸಂವಹನ ಜಾಲ ರಚಿಸುವ
ಈ ಗುಣ ಕಲಿಯುವೆ
by ಹರೀಶ್ ಶೆಟ್ಟಿ, ಶಿರ್ವ

Monday, May 7, 2012

ನನ್ನವಳು

ಹೇ... ಸೂರ್ಯ ಚಂದ್ರ
ನನಗಿಲ್ಲ ನಿಮ್ಮ ಅವಶ್ಯಕತೆ
ನನ್ನವಳು ನನ್ನ ಬಳಿ ಇದ್ದಾಗ
ನನ್ನ ಜಗತೆಲ್ಲ ಪ್ರಕಾಶಮಯ
by  ಹರೀಶ್ ಶೆಟ್ಟಿ, ಶಿರ್ವ

Saturday, May 5, 2012

ಬೇಸರ

ಬೇಸರ ಅವರಿಂದ ಅಲ್ಲ
ಅವರ ವರ್ತನೆಯಿಂದ
ಮೊಗ್ಗು ಹೂವಾಗುವ ಮುಂಚೆ
ಕಿತ್ತು ಬಿಸಾಕಿ ಬಿಟ್ಟರು

ಬೇಸರ ಅವರಿಂದ ಅಲ್ಲ
ಅವರ ಅಹಂಕಾರದಿಂದ
ನಾನೇ ನಾನು ನೀನು ಯಾರು
ನನ್ನ ಕೇಳದಿದ್ದರೆ ನೀ ಆಗುವೆ ಗಡಿ ಪಾರು

ಬೇಸರ ಅವರಿಂದ ಅಲ್ಲ
ಅವರ ಅಭಿಮಾನದಿಂದ
ನಾನು ಶ್ರೇಷ್ಠ ನೀನು ಸಾಮಾನ್ಯ
ನಾನು ಗಣ್ಯ ನೀನು ಅಗಣ್ಯ

ಬೇಸರ ಅವರಿಂದ ಅಲ್ಲ
ಅವರ ಅವಿವೇಕಿತನದಿಂದ
ತಪ್ಪು ಸರಿಯ ಅರಿವಿಲ್ಲ
ನಾನು ಜ್ಞಾನಿ ನಿನಗೇನೂ ಗೊತ್ತಿಲ್ಲ
by ಹರೀಶ್ ಶೆಟ್ಟಿ, ಶಿರ್ವ

ಅವಳೊಬ್ಬಳೆ

ತುಂಬಾ ಜೋರಾದ ಮಳೆ
ಮಿಂಚು ಗುಡುಗು
ಅವಳೊಬ್ಬಳೆ
ಭಯಭೀತ

ಕಪ್ಪು ಸೀರೆ
ಬೆಳ್ಳನೆಯ ಮೈ ಬಣ್ಣ
ಸುಂದರ ನಯನ
ಅದ್ಭುತ ರೂಪ

ಗಾಡ ಕತ್ತಲೆ
ಏರುತ್ತಿದ್ದ ಮಳೆ
ಒಬ್ಬಂಟಿ ಅಬಲೇ
ತೊಂದರೆಯಲಿ ಕೋಮಲೆ

ಅವನ ಆಗಮನ
ಅವಳನ್ನು ಕಂಡು
ಸಹಾಯದ ಆಹ್ವಾನ
ಅವಳಿಗೆ ಹೆದರಿಕೆ ಕಂಪನ

ಅರಿತ ಅವಳ ಮನಸ್ಥಿತಿ
ಅವಳು ಅರಿತಳು
ನನಗಿಲ್ಲ ಈಗ ಬೇರೆ ಗತಿ
ನಡೆದಳು ಅವನೊಟ್ಟಿಗೆ

ಬೈಕು ಓಡಿಸುತ್ತಾ
ತುಟಿಯಲ್ಲಿ ನಗು ಇವನ
ಹಿಂದೆ ಕೂತಿದ್ದಾಳೆ
ಬರಪೂರ ಯೌವನ

ತುಸು ದೂರ ಹೋದಾಗಲೇ
ಏನೋ ಬಾಸವಾಯಿತು
ಹಿಂದೆಯಿಂದ ಅವನ
ಕುತ್ತಿಗೆ ಹಿಸುಕಿದಂತಾಯಿತು

ಜೋರಾಗಿ ಕಿರುಚಿದ
ಬೈಕು ಬ್ರೇಕ್ ಒತ್ತಿದ
ಕನಸಿಂದ ಹೊರ ಬಂದ
ಅವಳು ಅಲ್ಲೇ ಇದ್ದಳು
ಆಶ್ಚರ್ಯದಿಂದ ಅವನನ್ನು ನೋಡುತ್ತಿದ್ದಳು
by ಹರೀಶ್ ಶೆಟ್ಟಿ, ಶಿರ್ವ



Wednesday, May 2, 2012

ಸಮದ್ರದ ಅಲೆಗಳು

ಈ ಸಮದ್ರದ ಅಲೆಗಳು
ನನ್ನ ನೆನಪು 
ತೀರದಲ್ಲಿದ್ದ ಬಂಡೆ
ನನ್ನ ಹೃದಯ
ಸತತ ಬಂದು ನನ್ನ ಹೃದಯಕ್ಕೆ
ಅಪ್ಪಳಿಸಿ ಹೋಗುತ್ತದೆ
by ಹರೀಶ್ ಶೆಟ್ಟಿ, ಶಿರ್ವ

Tuesday, May 1, 2012

ಪ್ರೀತಿಯ ನೀರು

ಅವಳನ್ನು ಪುನಃ ನೋಡಿ
ಮನಸ್ಸ ಕಡಲಲ್ಲಿ ಬಿರುಗಾಳಿ
ನೆನಪ ಸೇತುವೆಯಿಂದ
ಶಾಂತ ಚಿತ್ತವಾಗಿದ್ದ
ಪ್ರೀತಿಯ ನೀರು
ಹರಿಯಲಾರಂಬಿಸಿತು ವೇಗದಲಿ !
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...